Tuesday, 28 June 2011

೧೦ ಎಡಿಶನ್, ೧೦ ಪ್ರಿಂಟಿಂಗ್ ಮೆಷಿನ್, ಒಬ್ಬ ಪ್ರಿಂಟಿಂಗ್ ತಂತ್ರಜ್ಞ

ಸಂಕೇಶ್ವರ ಅವರ ಹೊಸ ಪತ್ರಿಕೆ ಕಾರ್ಯ ಬಿರುಸಿನಿಂದ ಸಾಗಿದೆ. ಮೊದಲು ಸಂಕೇಶ್ವರ ಅವರ ಜೊತೆಗಿದ್ದ, ಅವರು ಪತ್ರಿಕೆ ಮಾರಾಟ ಮಾಡಿದಾಗ ಟೈಮ್ಸ್ ಗ್ರೂಪ್ ಗೆ ಹೋಗಿದ್ದ ಜಿ.ಎಸ್. ಕುಲಕರ್ಣಿ ವಿಜಯ ಕರ್ನಾಟಕಕ್ಕೆ ರಾಜೀನಾಮೆ ನೀಡಿ, ಸಂಕೇಶ್ವರರ ಜೊತೆ ಸೇರಿದ್ದಾರೆ. ಇವರೊಬ್ಬ ಪ್ರಿಂಟಿಂಗ್ ಡಾನ್ ಎನ್ನಬಹುದು!
ಮೂಲಗಳ ಪ್ರಕಾರ ಸಂಕೇಶ್ವರ ಅವರು ಒಂದೇ ಏಟಿಗೆ ೧೦ ಆವೃತ್ತಿ ಆರಂಭಿಸುವ ಹುಮ್ಮಸ್ಸಿನಲ್ಲಿದ್ದಾರೆ. ೧೦ ಕಡೆಯೂ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸುವ ಉದ್ದೇಶ ಅವರದ್ದು. ಬಲು ಜೋರಿನಿಂದಲೇ ಮಾರುಕಟ್ಟೆ ಪ್ರವೇಶಿಸುವುದು ಸಂಕೇಶ್ವರರ ಉದ್ದೇಶ. ಪೂನಾ ಮೂಲದ ಮೊನೋಗ್ರಾಪ್ ಕಂಪನಿಯಾ ಅಶ್ವಥ ಆರಾಯಣ ಎಂಬವರ ಜೊತೆ ಶನಿವಾರ ಮಾತುಕತೆ ನಡೆಸಿದ್ದಾರೆ.

ಸಾಕಷ್ಟು ಓದುಗರು ಮಂಗಳವಾರದ ಸಂಕೇಶ್ವರ-ಶಿವ ಭೇಟಿ ಏನಾಯ್ತು? ಎಂಬ ಕುತೂಹಲ ತೋರಿದ್ದಾರೆ. ನಮಗೂ ಆ ಕುತೂಹಲ ಇತ್ತು. ಆದರೆ ಹೇಳಿಕೊಳ್ಳುವಂತಹ ಬೆಳವಣಿಗೆ ಆಗಿಲ್ಲ. ಇನ್ನು ಕೆಲವು ದಿನದಲ್ಲಿ ತಿಳಿಸುವುದಾಗಷ್ಟೆ ಹೇಳಿದ್ದಾರೆ. ಶಿವಸುಬ್ರಹ್ಮಣ್ಯ ಅವರು (ಓದುಗರೊಬ್ಬರು ಏಕವಚನ ಬೇಡ ಎಂದಿದ್ದಾರೆ. ಅದಕ್ಕೆ ಬೆಲೆಕೊಟ್ಟು...) ತಮ್ಮ ಆಪ್ತರೊಬ್ಬರ ಬಳಿ 'ಸಭೆ ಚೆನ್ನಾಗಿ ನಡೆಯಿತು. ಆದರೆ ಅವರು ಯಾವುದಕ್ಕೂ ಕಮಿಟ್ ಆಗಿಲ್ಲ' ಎಂದು ಹೇಳಿಕೊಂಡಿದ್ದಾರೆ.

ವಿಜಯ ಸಂಕೇಶ್ವರರು ಇನ್ನು ೧೦-೧೫ ದಿನದಲ್ಲಿ ತಿಳಿಸುವುದಾಗಿ ಹೇಳಿದ್ದಾರೆ. ಅದಕ್ಕೆ ಶಿವಸುಬ್ರಹ್ಮಣ್ಯ ಅವರು ತೋಟಕ್ಕೆ, ಕಾಡಿಗೆ ಹೋಗುತ್ತಿರುತ್ತೇನೆ. ಆಗೆಲ್ಲ ಮೊಬೈಲ್ ನಾಟ್ ರೀಚೆಬಲ್ ಆಗಿರುತ್ತದೆ ಎಂದಿದ್ದಾರೆ. ಅದಕ್ಕೆ ಸಂಕೇಶ್ವರ ಅವರು ಪರವಾಗಿಲ್ಲ. ನಿಧಾನವಾಗೆ ತಿಳಿಸುತ್ತೇವೆ ಎಂದಿದ್ದಾರೆ.

ವಿಶೇಷವೆಂದರೆ ನಿನ್ನೆಯ ಭೇಟಿ ಸಂದರ್ಭದಲ್ಲಿ ಸಂಕೇಶ್ವರರ ಜೊತೆ ತಿಮ್ಮಪ್ಪ ಭಟ್ ಕೂಡ ಇದ್ದರು! 

ಇದು ಸಂಕೇಶ್ವರರ ಚಾಲಾಕಿ ನಡೆ. ಭೇಟಿ ಸಂದರ್ಭ ತಿಮ್ಮಪ್ಪ ಭಟ್ ಅವರನ್ನು ಇರಿಸಿಕೊಳ್ಳುವ ಮೂಲಕ ಶಿವಸುಬ್ರಹ್ಮಣ್ಯ ಅವರಿಗೆ ಈಗಾಗಲೇ ಒಬ್ಬರು ಇದ್ದಾರೆ ಎಂಬ ಸಂದೇಶ ರವಾನಿಸಿದ್ದಾರೆ. ಇದೆ ಸಮಯದಲ್ಲಿ ತಿಮ್ಮಪ್ಪ ಭಟ್ ಅವರಿಗೆ ಇನ್ನೊಬ್ಬ ಪೈಪೋಟಿಗಿದ್ದಾನೆ ಎಂಬುದನ್ನು ತೋರಿಸಿದ್ದಾರೆ.


ಇದನ್ನೆಲ್ಲಾ ಸಂಕೆಶ್ವರರಿಗೆ ಹೇಳಿಕೊಡಬೇಕಾಗಿಲ್ಲ ಬಿಡಿ!!

Monday, 27 June 2011

ಸಂಕೇಶ್ವರ- ಶಿವ ಭೇಟಿ!

ಇದು ಈ ಕ್ಷಣದ ಬ್ರೆಕಿಂಗ್ ನ್ಯೂಸ್.

ಹೊಸ ಪತ್ರಿಕೆ ಮಾಡುವ ಹುಮ್ಮಸ್ಸಿನಲ್ಲಿರುವ ವಿಜಯ ಸಂಕೇಶ್ವರ ಅವರನ್ನು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಚೇರಿಯಲ್ಲಿ ಹುದ್ದೆಗಾಗಿ ಚಡಪಡಿಸುತ್ತಿರುವ ಶಿವ ಸುಬ್ರಹ್ಮಣ್ಯ ಮಂಗಳವಾರ ಬೆಳಿಗ್ಗೆ ೧೦.೦೦ ಗಂಟೆಗೆ ಭೇಟಿ ಮಾಡಿದ್ದಾರೆ. ಶಿವನ ಕುರಿತು ಸಂಕೇಶ್ವರ ಅವರ ಅಭಿಪ್ರಾಯ ಏನಿದೆ ಎಂಬುದನ್ನು ಮೊದಲೇ ಪ್ರಕಟಿಸಲಾಗಿದೆ. ಸಂಕೇಶ್ವರ ಅವರ ನಿರಾಸಕ್ತಿಯ ಹೊರತಾಗಿಯೂ ಕೆಲವರನ್ನು ಕಾಡಿ ಬೇಡಿ ಅವರನ್ನು ಭೇಟಿ ಮಾಡಲು ಶಿವ ಯಶಸ್ವಿಯಾಗಿದ್ದಾರೆ. ಈಗಾಗಲೇ ಹೊಸಪತ್ರಿಕೆ ಕಾರ್ಯಾರಂಭದ ಸೂಚನೆಯಾಗಿ ತಿಮ್ಮಪ್ಪ ಭಟ್ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವರ ಕೈ ಕೆಳಗೆ ಬೇಕಾದರೂ ಕೆಲಸ ಮಾಡಲು ಸಿದ್ಧ ಎಂದು ಶಿವ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಸುದ್ದಿ ಪ್ರಕಟಿಸುವಾಗ ಭೇಟಿ ಇನ್ನು ಜಾರಿಯಲ್ಲಿತ್ತು.

ಫಲಶ್ರುತಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು.

Monday, 20 June 2011

ಸಂಕೇಶ್ವರ್ ಪತ್ರಿಕೆಗೆ ತಿಮ್ಮಪ್ಪ ಭಟ್

ಕರಾರಿನ ಅವಧಿ ಮುಗಿಯುತ್ತಿದ್ದಂತೆ ಸಂಕೇಶ್ವರರು ಪತ್ರಿಕೆ ಕೆಲಸ ಆರಂಭಿಸಿದ್ದಾರೆ. ಮೊದಲ ಹೆಜ್ಜೆಯಾಗಿ ತಿಮ್ಮಪ್ಪ ಭಟ್ಟರನ್ನು ನೇಮಿಸಿಕೊಂಡಿದ್ದಾರೆ. ಆದರೆ ಅವರನ್ನು ಸಂಪಾದಕರನ್ನಾಗಿ ನೇಮಿಸಿಕೊಂಡಿದ್ದಾರೋ ಅಥವಾ ಸಲಹೆಗಾರ ರೀತಿ ನೇಮಿಸಿಕೊಂಡಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.

ತಿಮ್ಮಪ್ಪ ಭಟ್ ನೇಮಕದೊಂದಿಗೆ ಸಂಕೇಶ್ವರರ ಪತ್ರಿಕೆಗೆ ನೇಮಕ ಆರಂಭಗೊಳ್ಳುವ ಸೂಚನೆ ಇದೆ. ಇದು ಪತ್ರಕರ್ತರ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಲಿದೆ. ಕೆಲವರು ಆಗಲೇ ಯಾವ ಹುದ್ದೆಗೆ ಸೇರಬೇಕು ಎಂದು ಸ್ಕೆಚ್ ಹಾಕಿದ್ದಾರಂತೆ. ಸಂಕೇಶ್ವರರು ಹಾಗು ತಿಮ್ಮಪ್ಪ ಭಟ್ಟರು ಇವರಿಗೆಲ್ಲ ಹೇಗೆ ಮಣೆಹಾಕುತ್ತಾರೆ ನೋಡಬೇಕು.

ಉದಯವಾಣಿ ಬಳಗಕ್ಕೆ ರವಿ ಹೆಗ್ಡೆ ಬಳಗ ಹೋದ ಮೇಲೆ ತಿಮ್ಮಪ್ಪ ಭಟ್ಟರು ಅಲ್ಲಿಂದ ಹೊರಬಿದ್ದಿದ್ದರು. ಅಷ್ಟೇ ಬೇಗ ಇನ್ನೊಂದು ಸ್ಥಾನ ಗಳಿಸಲು ಅವರು ಯಶಸ್ವಿಯಾಗಿದ್ದಾರೆ. ಆದರೆ ಇನ್ನಿಬ್ಬರು ಮಾಜಿ ಸಂಪಾದಕರು ಮಾತ್ರ ಇನ್ನು ಹುದ್ದೆ ಹುಡುಕಾಟದಲ್ಲಿ ಬ್ಯೂಸಿ!

Tuesday, 14 June 2011

ಬರಲಿದೆ ಸಂಕೇಶ್ವರರ ಪತ್ರಿಕೆ

ಟೈಮ್ಸ್ ಬಳಗ ಸಂಕೇಶ್ವರರಿಗೆ ವಿಧಿಸಿದ್ದ ಕರಾರು ಮುಗಿದಿದೆ!

ಬಹಳಷ್ಟು ಜನ  ಅಂದುಕೊಂಡಿರುವಂತೆ ಸಂಕೇಶ್ವರ ಮತ್ತು ಟೈಮ್ಸ್ ನಡುವಿನ ಕರಾರು ಆಗಸ್ಟ್ ತಿಂಗಳಲ್ಲಿ ಮುಗಿಯುತ್ತೆ ಎಂದು ನಂಬಿದ್ದರು. ಆದರೆ ಸಂಕೇಶ್ವರ ಅವರ ಆಪ್ತರೊಬ್ಬರು ನೀಡಿದ ಮಾಹಿತಿ ಪ್ರಕಾರ ವಿಜಯ ಕರ್ನಾಟಕ ಖರೀದಿಸಿದಾಗ ೫ ವರ್ಷ ಹೊಸ ಪತ್ರಿಕೆ ಆರಂಭಿಸಬಾರದು ಎಂದು ಟೈಮ್ಸ್ ವಿಧಿಸಿದ್ದ ಕರಾರಿನ ಅವಧಿ ಜೂನ್ ೧೪ಕ್ಕೆ ಕೊನೆಗೊಂಡಿದೆ!

ವಿಜಯ ಕರ್ನಾಟಕ ಮೂಲಕ ವಿಜಯ ಸಂಕೇಶ್ವರರು ಕನ್ನಡ ಪತ್ರಿಕೋದ್ಯಮದಲ್ಲಿ ಕ್ರಾಂತಿ ಮಾಡಿದವರು. ಹೊಸ ಆಯಾಮ ಕೊಟ್ಟವರು. ಅವರು ಈಗ ಮತ್ತೊಮ್ಮೆ ಕನ್ನಡ ಪತ್ರಿಕೋದ್ಯಮದಲ್ಲಿ ಕಾಲಿಡಲು ಕಾತುರರಾಗಿದ್ದಾರೆ. ತಂದೆಗಿಂತ ಅವರ ಪುತ್ರ ಆನಂದ ಸಂಕೇಶ್ವರ ಹೆಚ್ಚು ಆಸಕ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಹಲವು ಪತ್ರಕರ್ತರು ಹೊಸ ಪತ್ರಿಕೆಗೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಸಂಪಾದಕರ ಹುದ್ದೆಗೆ ಕಪ್ರ ಮಾಜಿ ಸಂಪಾದಕ ಶಿವಸುಬ್ರಹ್ಮಣ್ಯ ಟಾವೆಲ್ ಹಾಕಿದ್ದಾರಂತೆ. ಅವರು ಶ್ರೀರಾಮುಲು ಅವರ ಬಂಟನೊಬ್ಬನ ಮೂಲಕ ಸಂಕೇಶ್ವರ್ ಅವರೊಂದಿಗೆ ಭೇಟಿ ಅವಕಾಶ ಗಿಟ್ಟಿಸಿದ್ದಾರೆ. ಆದರೆ ಸಂಕೇಶ್ವರರು "ಅವನೇನು ಅನ್ನೋದು ಗೊತ್ತು ಬಿಡಿ'" ಎಂದು ಭೇಟಿಗೆ ಮೊದಲೇ ನಿರ್ಣಯ ಘೋಷಿಸಿದ್ದಾರೆ!

ಸಂಕೇಶ್ವರರ ಪತ್ರಿಕೆಗೆ ಹೋಗುವವರು ಹೋಗಲಿ ಎಂಬ ಕಾರಣಕ್ಕೆ ಟೈಮ್ಸ್ ಪತ್ರಿಕೆ ವಿಕದಲ್ಲಿ ಇನ್ನು ಸ್ಯಾಲರಿ ಹೆಚ್ಚಿಸಿಲ್ಲ. ಹಿಂದಿನ ವರ್ಷ ಸಾಕಷ್ಟು ಸ್ಯಾಲರಿ ಹೆಚ್ಚಿಸಿದ್ದೇವೆ. ಈ ವರ್ಷ ಮತ್ತೆ ಹೆಚ್ಚಳ ಇಲ್ಲ ಎಂದೂ ಹೇಳಲಾಗುತಿದೆ. ಅಂತು ಈವರೆಗೆ ಸ್ಯಾಲರಿ ಹೆಚ್ಚಿಸಿಲ್ಲ.

ಸಂಕೇಶ್ವರರು ಹೊಸ ಪತ್ರಿಕೆ ಆರಂಭಿಸಿದರೆ ಕನ್ನಡ ಪತ್ರಿಕೋದ್ಯಮದಲ್ಲಿ ಮತ್ತೊಮ್ಮೆ ಭಾರಿ ಪಲ್ಲಟಗಳು ನೋಡಲು ಸಿಗಬಹುದು.

ನಿಮ್ಮ ಪ್ರೀತಿಗೆ ಶರಣು

ಮೌಲ್ಯಮಾಪನ, ಪ್ರವೇಶ ಪ್ರಕ್ರಿಯೆ ನಡುವೆ ಬ್ಯೂಸಿ. ಪರಿಣಾಮ ಬ್ಲಾಗು ಬಂದಾಗಿತ್ತು.

ಆದರೆ ಓದುಗರಾದ ನಿಮ್ಮ ಪ್ರೀತಿ ದೊಡ್ಡದು. ಹೊಸ ಪೋಸ್ಟುಗಳು ಇಲ್ಲದೆಯೂ ನೀವು ಬ್ಲಾಗಿಗೆ ಬಂದು ಹೋಗಿದ್ದೀರಿ. ನೋಡುಗರ ಸಂಖ್ಯೆ ೨೫,೦೦೦ ದಾಟಿದೆ. ಕೆಲವರು ಸರಕು ಖಾಲಿಯಾಯಿತಾ ಎಂದು ಕಿಚಾಯಿಸಿದ್ದಾರೆ. ಇನ್ನು ಕೆಲವರು ಸ್ವಲ್ಪ ಮಾಹಿತಿ ಒದಗಿಸಿ ಬರೆಯಿರಿ, ನಿಲ್ಲಿಸಬೇಡಿ ಎಂದಿದ್ದಾರೆ.

ಇಬ್ಬಗೆಯ ಓದುಗರಿಗೂ ನಾನು ಶರಣು. ಓದುಗರ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು ಮತ್ತೆ ಬ್ಲಾಗಿಗೆ ಮರಲಿರುವೆ.

ಥಾಂಕ್ಯೂ......................