Tuesday, 26 July 2011

'ಸಮಯ' ಸಾಧಕರಾಗಲಿದ್ದಾರೆಯೆ ಮೋಹನ್?

ಶಶಿಧರ ಭಟ್ಟರಿಗೆ ಎಲ್ಲು ನಿಲ್ಲಲಾಗುತ್ತಿಲ್ಲ. ಸಮಯದಲ್ಲೂ ಅವರ 'ಅವಧಿ' ಮುಗಿಯುತ್ತಿರುವ ಸೂಚನೆ ಕಾಣುತ್ತಿದೆ. ಅದಕ್ಕೆ ಹೊಸ ಮುಖ್ಯಸ್ಥರಾಗಿ ಜಿ.ಎನ್. ಮೋಹನ್ ಬರಲಿದ್ದಾರೆ ಎಂಬ ಸುದ್ದಿಯನ್ನು ಅವರು ಮತ್ತು ಅವರ ಚೇಲಾ ನಡೆಸುತ್ತಾರೆ ಎನ್ನಲಾಗುವ ಬ್ಲಾಗ್ ನಲ್ಲಿ ಬರೆಯಲಾಗಿದೆ.
 
ಅವರಂತಹ ಸಮಯ ಸಾಧಕ ಖಂಡಿತವಾಗಿ ಸಿಗಲಾರರು!
ಜಿ.ಎನ್. ಮೋಹನ್ ಎಡಪಂಥೀಯ. ಸಂಘ ಪರಿವಾರವನ್ನು, ಬಿಜೆಪಿಯನ್ನು ಟೀಕಿಸುತ್ತಿದ್ದರು, ಆಮೇಲೆ ಮಾಡಿದ್ದೇನು? ಬಿಜೆಪಿ ಸರಕಾರದ ಹಲವಾರು ಪುಸ್ತಕಗಳ ಗುತ್ತಿಗೆ ಪಡೆದರು. ಅವರು ಹಲವು ಬಾರಿ ವಿಶ್ವೇಶ್ವರ ಭಟ್ಟರನ್ನು ಮತ್ತು ವಿಜಯ ಕರ್ನಾಟಕವನ್ನು ಟೀಕಿಸಿದ್ದರು. 

ಈ ಮಧ್ಯದಲ್ಲಿ ಅವರು ಬೆಳೆಸಲು ನೋಡಿದ ಮೇಫ್ಲವರ್ ಗಿಡ ಬಾಡಿಹೋಯಿತು. ಅದನ್ನು ದೊಡ್ಡಮೊತ್ತಕ್ಕೆ ಮಾರಿದೆ ಎಂದು ಜನರ ಕಿವಿಯ ಮೇಲೆ ಹೂ ಇಟ್ಟರು.

ಯಾರೂ ಕರೆದು ಮಾತನಾಡಿಸದ ಸ್ಥಿತಿಯಲ್ಲಿದ್ದ ಮೋಹನ್ ಗೆ ವಿಶ್ವೇಶ್ವರ ಭಟ್ಟರು ಕರೆದು 'ಮೀಡಿಯಾ ಮಿರ್ಚಿ' ಅಂಕಣ ನೀಡಿದರು. ಕೆಲವೇ ದಿನದಲ್ಲಿ ಮೋಹನ್ ಹಿರಿಯ ಅಂಕಣಕಾರರು ಎಂದು ಹಾಕಿಕೊಳ್ಳಲಾರಂಭಿಸಿದರು.

ಅಂಕಣ ಬರೆಯುವಾಗ ಹಿಂದೆ ಭಟ್ಟರನ್ನು ಮತ್ತು ಪತ್ರಿಕೆಯನ್ನು ಟೀಕಿಸಿದ್ದನ್ನು ಮರೆತು ಪ್ರತಿ ಶನಿವಾರ ತಮಗಾಗದವರ ವಿರುದ್ಧ ಮಿರ್ಚಿ ಅರೆಯಲಾರಂಭಿಸಿದರು. ಅಂಕಣದಲ್ಲಿ ಬರೆದದ್ದು ಬರೀ ಆತ್ಮರತಿ. ಇದನ್ನು ಗಮನಿಸಿದರೂ ಭಟ್ಟರು ಈ ಆತ್ಮರತಿಗೊಂದು ಗತಿ ಕಾಣಿಸುವ ಕಾಯಕಕ್ಕೆ ಕೈ ಹಾಕಲಿಲ್ಲ. ಮೋಹನ್ ಅವರ ಸಾಧನೆ ಏನು ಎಂಬುದನ್ನು ಮಂಗಳೂರು ಜನರ ಬಳಿ ಕೇಳಬೇಕು. ಆತ್ಮರತಿಯ ಅಂಕಣದಲ್ಲಿ ಅದರ ವಿವರಗಳು ಬಾರದಿರುವುದು ಅಚ್ಚರಿ.
 
ಈಗ ಅದೇ ಸಮಯ ಸಾಧಕತನವನ್ನು ಮುಂದುವರಿಸಿದ್ದಾರೆ. ಬಿಜೆಪಿಯನ್ನು ಸದಾ ಟೀಕಿಸುತ್ತಿದ್ದ ಅವರು ಬಿಜೆಪಿಯ ಸಚಿವರೊಬ್ಬರ ಚಾನಲ್ ಮುಖ್ಯಸ್ಥರಾಗಲು ಕೋಟು ಹಾಕಿಕೊಂಡು ರೆಡಿಯಾಗಿ ನಿಂತಿದ್ದಾರೆ. ಸಚಿವ ನಿರಾಣಿಗೆ ಇವರಿಗಿಂತ ದೊಡ್ಡ ಸಮಯ ಸಾಧಕರು ಸಿಗಲು ಸಾಧ್ಯವೇ?

ಈಗಲಾದರೂ ಅವರು ಹೆಸರನ್ನು ಸಾರ್ಥಕಪಡಿಸಿಕೊಳ್ಳುತ್ತಾರಾ? ಕಾದುನೋಡೋಣ.

Thursday, 21 July 2011

ಕೆಪಿಗೆ ರಾಜೇವ್ ಭೇಟಿ

ಹೊಸ ಮಾಲಿಕ, ರಾಜ್ಯಸಭೆ ಸದಸ್ಯ ರಾಜೇವ್ ಚಂದ್ರಶೇಖರ್ ಮಂಗಳವಾರ ಕನ್ನಡಪ್ರಭ ಕಚೇರಿಗೆ ಮೊದಲ ಭೇಟಿ ನೀಡಿದ್ದಾರೆ. ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಲಾಭದ ಮಾತು ಆಡದಿರುವುದು ಕೆಪಿ ಸಿಬ್ಬಂದಿಯಲ್ಲಿ ಅಚ್ಚರಿ ಮೂಡಿಸಿದೆ.
 
"ಕನ್ನಡಪ್ರಭ ಕರ್ನಾಟಕದ ಪ್ರಭಾವಿ, ಪ್ರಾಮಾಣಿಕ ಮತ್ತು ಧೈರ್ಯ ಹೊಂದಿರುವ ಪತ್ರಿಕೆಯಾಗಬೇಕು. ಪ್ರಸಾರ, ಜಾಹೀರಾತಿನಲ್ಲಿ ನಂ ೧ ಆಗದಿದ್ದರು ತೊಂದರೆಯಿಲ್ಲ. ಜನ ಇಷ್ಟಪಡುವ ಪತ್ರಿಕೆಯಾಗಬೇಕು. ನಾನು ರಾಜಕೀಯ ಉದ್ದೇಶಕ್ಕಾಗಿ ಪತ್ರಿಕೆ ಖರೀದಿಸಿದೆ. ನನ್ನ ಉದ್ಯಮದ ಏಳ್ಗೆಗೆ ಬಳಸಿಕೊಳ್ಳುವ ಉದ್ದೇಶದಿಂದ ಪತ್ರಿಕೆ ಖರೀದಿಸಿದೆ ಎಂದೆಲ್ಲ ಹೇಳಲಾಗುತ್ತಿದೆ. ಆದರೆ ನನ್ನ ಉದ್ಯಮಕ್ಕೆ ಅಥವಾ ನನ್ನ ರಾಜಕೀಯಕ್ಕೆ ಮತ್ತು ಪತ್ರಿಕೆಗೆ ಸಂಬಂಧವಿಲ್ಲ" ಎಂದು ಹೇಳಿರುವುದು ಕೆಪಿ ಸಿಬ್ಬಂದಿಯಲ್ಲಿ ಅಚ್ಚರಿಗೆ ಕಾರಣವಾಗಿದೆ.

ಸಾಮನ್ಯವಾಗಿ ಮಾಲಿಕರು ಲಾಭದ ಮಾತಾಡುತ್ತಾರೆ. ಈ ವರ್ಷ ಈಷ್ಟು ಟಾರ್ಗೆಟ್ ಇದೆ. ಅಷ್ಟು ಲಾಭ ಮಾಡಬೇಕೆಂದುಕೊಂಡಿದ್ದೇವೆ ಎಂದೆಲ್ಲ ಮಾತನಾಡುತ್ತಾರೆ. ಆದರೆ ರಾಜೀವ್ ಚಂದ್ರಶೇಖರ್ ಮೊದಲಬಾರಿಗೆ ಬೇರೆ ಧಾಟಿಯಲ್ಲಿ ಮಾತನಾಡಿದ್ದಾರಂತೆ.

ನೋಡೋಣ ಏನೇನ್ ಮಾಡ್ತಾರೆ ಅಂತ!

ಮೀಡಿಯಾ ಮನ ಮೊಬೈಲ್ ನಲ್ಲಿ!

ಬದಲಾವಣೆ, ಓದುಗರ ಅಗತ್ಯಗಳಿಗೆ ತಕ್ಕಂತೆ ಮೀಡಿಯಾ ಮನ ಬದಲಾಗಿದೆ. ಕೆಲಬು ದಿನದಿಂದ ಮೀಡಿಯಾ ಮನ ಮೊಬೈಲ್ ಫ್ರೆಂಡ್ಲಿಯಾಗಿದೆ. ನೀವು ನಿಮ್ಮ ಮೊಬೈಲ್ ನಲ್ಲಿ ಮೀಡಿಯಾ ಮನ ಬ್ಲಾಗನ್ನು ಸುಲಭವಾಗಿ ನೋಡಬಹುದು. ಬ್ಲಾಗ್ ಸ್ಪಾಟ್ ನವರು ಈ ಅವಕಾಶ ಒದಗಿಸುವ ಮೂಲಕ ಆಧುನಿಕ ತಂತ್ರಜ್ಞಾನಕ್ಕೆ ತಕ್ಕ ಬದಲಾವಣೆ ಮಾಡಿದ್ದಾರೆ.
 
ಈ ತಂತ್ರಜ್ಞಾನದಿಂದ ನೀವು ನಿಮ್ಮ ಮೊಬೈಲ್ ನಲ್ಲಿ ಮೀಡಿಯಾ ಮನ ಬ್ಲಾಗ್ ನೋಡಬಹುದು. ಆಗ ಪ್ರತಿ ಪೋಸ್ಟ್ ನ ಸ್ವಲ್ಪಭಾಗ ಮಾತ್ರ ಕಾಣಿಸುತ್ತದೆ. ಯಾವುದನ್ನು ಓದಬೇಕೊ ಅದನ್ನು ಕ್ಲಿಕ್ ಮಾಡಿದರೆ ಅದರ ಪೂರ್ಣಪಾಠ ನೋಡಬಹುದು.

ಇನ್ನು ನೀವು ಎಲ್ಲೇ ಇರಿ ಮೀಡಿಯಾ ಮನ ನಿಮ್ಮೊಂದಿಗಿರುತ್ತದೆ.

Monday, 18 July 2011

ನೆರಳೇ ಆ ಮರಕ್ಕೆ ಉರುಳಾಯಿತು

ವಿಜಯ ಕರ್ನಾಟಕ ಪತ್ರಿಕೆ ಪರಿಸರದ ಬಗ್ಗೆ ಕಾಳಜಿ ತೋರುತ್ತದೆ. ಸ್ಯಾಂಕಿ ರಸ್ತೆಯಲ್ಲಿ ಮರ ಕಡಿಯುವ ಬಗ್ಗೆ ವಿಸ್ತ್ರತ ವರದಿ ಪ್ರಕಟಿಸುತ್ತದೆ. ಆದರೆ ಒಬ್ಬ ವ್ಯಕ್ತಿಯ ಮಾತುಕೇಳಿ, ಮೂಢನಂಬಿಕೆಗೆ ಕಟ್ಟುಬಿದ್ದು ಇನ್ನೇನು ಗೊನೆ ಬಿಡಬೇಕಿದ್ದ ಬಾಳೇಮರವನ್ನು ಕಡಿಸಿಹಾಕಿದೆ!
 
ಬಾಳೆಮರ ಕಡಿದಿದ್ದು ಸಣ್ಣ ವಿಷಯ. ಆದರೆ ಅದನ್ನು ಯಾಕೆ ಕಡಿದರು ಎ‌ಂಬುದು ದೊಡ್ಡ ವಿಷಯ. ನಡೆದ ಘಟನೆ ಹೀಗಿದೆ.

ವಿಜಯ ಕರ್ನಾಟಕದ ಚೀಪ್ ರಿಪೋರ್ಟರ್ ಎಲ್. ಪ್ರಕಾಶ ಕಾರನ್ನು ವಿಜಯ ಕರ್ನಾಟಕದ ಕಚೇರಿ ಹೊರಗೆ ನಿಲ್ಲಿಸಿದ್ದರು. ಅಲ್ಲೇ ಸಮೀಪದಲ್ಲಿದ್ದ ತೆಂಗಿನ ಮರದಿಂದ ಕಾಯಿ ನೇರವಾಗಿ ನಿಲ್ಲಿಸಿದ್ದ ಕಾರಿನ ಬಾನೆಟ್ ಮೇಲೆ ಬಿದ್ದಿದೆ. ಬಾನೆಟ್ ನುಜ್ಜುಗುಜ್ಜಾಗಿದೆ. ಇದನ್ನು ನೋಡಿ ಎಲ್. ಪ್ರಕಾಶ್ ಗೆ ಎದೆ ಒಡೆದಂತಾಗಿದೆ. ತೆಂಗಿನ ಮರಕ್ಕೆ ಶಾಪ ಹಾಕುತ್ತಿದ್ದರು. ಶಾಪ ಕೇಳಿದ್ದರಿಂದಲೋ ಏನೊ ನೋಡ ನೋಡುತ್ತಿದ್ದಂತೆ ಇನ್ನೊಂದು ತೆಂಗಿನಕಾಯಿ ರೊಂಯ್ಯನೆ ಬಂದು ಕಾರಿನ ಮೇಲೆ ಬಿದ್ದಿದೆ. ಎದುರಿನ ಗಾಜು ಚೂರು ಚೂರು.
ಬಾಳೇ ಗಿಡದ ದುರದೃಷ್ಟ!
ಆದರೆ ತೆಂಗಿನಕಾಯಿ ಕಾರಿನ ಮೇಲೆ ಬಿದ್ದಿದ್ದಕ್ಕೆ ಎಲ್. ಪ್ರಕಾಶ್ ದೂರಿದ್ದು ಬಾಳೇಗಿಡವನ್ನು!
ಇದೇ ವಿಶೇಷ!

ಕಾರಿನ ಮೇಲೆ ತೆಂಗಿನಕಾಯಿ ಬಿದ್ದಿದ್ದು, ವಿಜಯ ಕರ್ನಾಟಕದ ಪ್ರಸಾರಸಂಖ್ಯೆ ಕಡಿಮೆಯಾಗುತ್ತಿರುವುದು, ವರದಿಗಾರರಿಗೆ ವಿಶೇಷ ವರದಿಗಳು ಸಿಗದಿರುವುದು ಇದಕ್ಕೆಲ್ಲ ಈ ಬಾಳೇಗಿಡದ ನೆರಳು ವಿಜಯ ಕರ್ನಾಟಕದ ಕಚೇರಿ ಮೇಲೆ ಬೀಳುತ್ತಿರುವುದೇ ಕಾರಣ. ಆದ್ದರಿಂದ ಆ ಬಾಳೇಮರ ಕಡಿಯಬೇಕು ಎಂದು ಆಡಳಿತ ಮಂಡಳಿ ತಲೆಗೆ ತುಂಬಿದ್ದಾರೆ. ತಾನೇ ಮುಂದೆನಿಂತು ಬಾಳೇಮರ ಕಡಿಸಿದ್ದಾರೆ!

ಬಿದ್ದಿದ್ದು ತೆಂಗಿನಕಾಯಿ. ಒಣಗಿದ ಕಾಯಿ ತೆಗೆಸದೆ ಇದ್ದುದರಿಂದ ಕಾಯಿ ಬಿದ್ದಿದೆ. ಎಲ್.ಪ್ರಕಾಶ್ ಸಿಟ್ಟು ಬಂದು ತೆಂಗಿನ ಮರ ತೆಗೆಸಬಹುದಿತ್ತು. ಕಾಯಿ ತೆಗೆಯದವರನ್ನು ತರಾಟೆಗೆ ತೆಗೆದುಕೊಳ್ಳಬಹುದಿತ್ತು. ಅದೆಲ್ಲ ಬಿಟ್ಟು ಏನೂ ಮಾಡದ ಬಾಳೇಗಿಡಕ್ಕೆ ಕೊಡಲಿಯೇಟು ಹಾಕಿಸಿದ್ದಾರೆ. ಸಾಲದ್ದಕ್ಕೆ ವಿಶೇಷ ವರದಿಗಳು ಸಿಗದಿರುವುದು, ಪ್ರಸಾರಸಂಖ್ಯೆ ಕುಸಿಯುತ್ತಿರುವುದಕ್ಕೂ ಬಾಳೇಗಿಡದ ನೆರಳನ್ನೇ ಹೊಣೆಯಾಗಿಸಿದ್ದಾರೆ!

ಪತ್ರಕರ್ತರ ಮೌಢ್ಯಕ್ಕೆ ಬೆಂಕಿಹಾಕ!

Wednesday, 13 July 2011

ಕೆಪಿಗೆ ರಾಜೀವ್ ಚಂದ್ರಶೇಖರ್ ಮಾಲಿಕತ್ವ: ಕೆಪಿ-ಸುವರ್ಣಕ್ಕೆ ಭಟ್ಟರ ನಾಯಕತ್ವ

 ಕನ್ನಡಪ್ರಭದಲ್ಲಿ ರಾಜ್ಯಸಭೆ ಸದಸ್ಯ ಹಾಗು ಉದ್ಯಮಿ ರಾಜೀವ್ ಚಂದ್ರಶೇಖರ್ ಹಣ ತೊಡಗಿಸಿರುವುದು ಹಳೆ ಸುದ್ದಿ. ವಿಶ್ವೇಶ್ವರ ಭಟ್ಟರು ಸುವರ್ಣ ಚಾನಲ್ ಮುಖ್ಯಸ್ಥರಾಗಿದ್ದು ಕೂಡ ಮಾಧ್ಯಮ ಲೋಕದಲ್ಲಿ ಬಹುತೇಕರಿಗೆ ತಿಳಿದಿದೆ. ಈ ಬದಲಾವಣೆ ನಂತರ ಕನ್ನಡಪ್ರಭದಲ್ಲಿ ಸಾಕಷ್ಟು ಬದಲಾವಣೆ ಆಗಬಹುದು ಎಂಬ ಮಾತು ಕೇಳಿಬರುತ್ತಿದೆ.

ಇವೆಲ್ಲ ಬದಲಾವಣೆಗಳು ಇಂದಿನಿಂದ ಅಫಿಶಿಯಲ್ ಆಗಿ ಘೋಷಣೆಯಾಗಲಿವೆ. ಇಂದಿನಿಂದ ಕನ್ನಡಪ್ರಭಕ್ಕೆ ರಾಜೀವ್ ಚಂದ್ರಶೇಖರ್ ಮಾಲೀಕರು. ಹಾಗೆಯೆ ವಿಶ್ವೇಶ್ವರ ಭಟ್ಟರು ಕನ್ನಡಪ್ರಭದ ಜೊತೆಗೆ ಸುವರ್ಣ ಚಾನಲ್ ನಾಯಕತ್ವವನ್ನೂ ವಹಿಸಿಕೊಳ್ಳಲಿದ್ದಾರೆ.  ವಿಶ್ವೇಶ್ವರ ಭಟ್ಟರು ಜುಲೈ 1ರಿಂದಲೇ ಸುವರ್ಣ ಚಾನಲ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಚ್ಚರಿಯ ವಿಶಯವೆಂದರೆ ಅವರು ಮುಖ್ಯಸ್ಥರಾದ ಮೊದಲವಾರದಲ್ಲಿ ಸುವರ್ಣ ಚಾನಲ್ ಉತ್ತಮ ಟಿಆರ್ ಪಿ ಗಳಿಸಿದೆ. ಭಟ್ಟರ ಲಕ್ಕು ಚೆನ್ನಾಗಿದ್ದಂತಿದೆ.

Tuesday, 12 July 2011

ವಿಜಯ ಸಂಕೇಶ್ವರ ಪತ್ರಿಕೆ ಹೆಸರು ವಿಜಯವಾಣಿ!

ವಿಜಯ ಸಂಕೇಶ್ವರ ಅವರ ಹೊಸ ಪತ್ರಿಕೆ ಹೆಸರು ಸಿದ್ಧವಾಗಿದೆ. ಹೊಸ ಪತ್ರಿಕೆ ಹೆಸರು ವಿಜಯವಾಣಿ!

ವಿಜಯ ಸಂಕೇಶ್ವರ ಅವರು ಈ ಹೆಸರನ್ನು ತುಮಕೂರಿನ ಪ್ರಕಾಶಕರೊಬ್ಬರಿಂದ 35 ಲಕ್ಷ ರೂಪಾಯಿಗೆ ಈ ಟೈಟಲನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ವೆಂಕಟೇಶಮೂರ್ತಿ ಎಂಬವರು ಈ ಹೆಸರಿನ ವಾರ ಪತ್ರಿಕೆ ನಡೆಸುತ್ತಿದ್ದರು. ವಿಜಯ ಸಂಕೇಶ್ವರ ಅವರು ಮೊದಲು ವಿಜಯಾನಂದ ಎಂದು ಹೊಸ ಪತ್ರಿಕೆಗೆ ಹೆಸರಿಡಲು ನಿರ್ಧರಿಸಿದ್ದರು. ಅದು ಉತ್ತಮ ಹೆಸರಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಂಕೇಶ್ವರ ಅವರು ವಿಜಯವಾಣಿ ಟೈಟಲ್ ಖರೀದಿಸಿದ್ದಾರೆ. ವೆಂಕಟೇಶ ಮೂರ್ತಿಯವರು ಪತ್ರಿಕೆ ಮಾರಾಟ ಮಾಡುವುದಕ್ಕಿಂತ ಅದರ ಹೆಸರು ಮಾರಾಟ ಮಾಡಿ ಹೆಚ್ಚು ಗಳಿಸಿದ್ದಾರೆ!

ಹೊಸ ಪತ್ರಿಕೆಗೆ ಹೀಗೆ ಹೆಸರಿಡುವುದರಿಂದ 2 ಲಾಭವಿದೆ. ಈ ಹೆಸರಿನ ಮೊದಲರ್ಧ ವಿಜಯ ಸಂಕೇಶ್ವರ ಅವರ ಹೆಸರಿನ ವಿಜಯವನ್ನು ಹೊಂದಿದೆ. ವಾಣಿ ಎಂಬುದು ಆನಂದ ಸಂಕೇಶ್ವರ ಪತ್ನಿ ಹೆಸರು. ವಿಜಯವಾಣಿ ಎಂಬುದು ಮಾವಸೊಸೆ ಕಾಂಬಿನೇಶನ್ ಕೂಡ ಹೌದು.
ವಿಜಯವಾಣಿ ಎಂಬ ಹೆಸರು ಉದಯವಾಣಿ ಎಂದಂತೆ ಕೇಳಿಸುತ್ತದೆ. ಪ್ರಜಾವಾಣಿಯಂತೆಯೂ ಕಾಣಿಸುತ್ತದೆ. ಹಿಂದಿನ ಬಾರಿ ವಿಜಯ ಕರ್ನಾಟಕ ಎಂದು ಹೆಸರಿಟ್ಟು ಸಂಯುಕ್ತ ಕರ್ನಾಟಕವನ್ನು ವಿಜಯ ಸಂಕೇಶ್ವರ ಅವರು ಹೆಚ್ಚು ಕಡಿಮೆ ಮುಳುಗಿಸಿದ್ದಾರೆ. ಈ ಬಾರಿ ಅವರು 2 ಪತ್ರಿಕೆ ಮೇಲೆ ಕಣ್ಣಿಟ್ಟಂತಿದೆ!