Monday, 4 April 2011

ಅಂದವಾಗಿ ವಿಶ್ವಕಪ್ ಕವರೇಜ್ ಮಾಡಿದ್ದು ಯಾರು?

ಕನ್ನಡದಲ್ಲಿ ಪ್ರಮುಖವಾಗಿ ೬ ಪತ್ರಿಕೆಗಳಿವೆ. ಅದರಲ್ಲಿ ಸಂಯುಕ್ತ ಕರ್ನಾಟಕವನ್ನು ಈ ಸ್ಪರ್ಧೆಯಿಂದ ಹೊರಗಿಡುವುದು ಒಳಿತು. ಉಳಿದ ೫ ಪತ್ರಿಕೆಗಳ ಕುರಿತು ಮಾತ್ರ ಚರ್ಚಿಸೋಣ.

ಭಾರತ ಫೈನಲ್ ಗೆದ್ದಾಗ ಉದಯವಾಣಿ ಸಂಪೂರ್ಣ ಪತ್ರಿಕೆಯನ್ನು ಅದಕ್ಕೆ ಅರ್ಪಿಸಿತು. ಇದು ಹೊಸ ಪ್ರಯೋಗ. ಸಂಪೂರ್ಣ ಪತ್ರಿಕೆಯನ್ನು ಒಂದು ವಿಷಯಕ್ಕೆ ಸಮರ್ಪಿಸಿದ್ದು ಇದೇ ಮೊದಲೇನೋ. ಇದರ ಶ್ರೇಯಸ್ಸು ರವಿ ಹೆಗಡೆ ಅವರಿಗೆ. ಆದರೆ ಬೇರೆ ಸುದ್ದಿಯನ್ನೇ ಪ್ರಕಟಿಸದಿರುವುದು ಅಷ್ಟು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಎಲ್ಲರಿಗು ಕ್ರಿಕೆಟ್ನಲ್ಲಿ ಆಸಕ್ತಿ ಇರಬೇಕೆಂದು ನಿಯಮವೇನೂ ಇಲ್ಲ. ಅಂತಹ ಓದುಗರಿಗಾಗಿ ಬೇರೆ ಸುದ್ದಿ ಹಾಕಬೇಕಿತ್ತು.

ಪಾಕಿಸ್ತಾನ ವಿರುದ್ಧ ಭಾರತ ಗೆದ್ದಗಲೇ 'ಉದಯವಾಣಿ' ಎಂಬ ಹೆಸರನ್ನು ಕೂಡ ಕೆಳಗೆ ಪ್ರಕಟಿಸಲಾಗಿತ್ತು. ಅದು ಸಾಲದೆಂಬಂತೆ ಮುಖಪುಟಕ್ಕೆ ನೀಲಿ ಬಣ್ಣ ತುಂಬಲಾಗಿತ್ತು. ಹೀಗಾಗಿ ಭಾರತ ಫೈನಲ್ ಗೆದ್ದಾಗ ಮಾಡಲು ಹೆಚ್ಚಿನದು ಏನು ಉಳಿದಿರಲ್ಲಿಲ್ಲ.

ಕನ್ನಡಪ್ರಭ ಉತ್ತಮವಾಗಿ ಕವರೇಜ್ ಮಾಡಿದೆ ಎಂಬುದಕ್ಕಿಂತ ಅಂದವಾಗಿ ಓದುಗರ ಮುಂದಿಟ್ಟಿದೆ. ಪುಟ ವಿನ್ಯಾಸ, ಹೆಡ್ಲೈನ್ ನಲ್ಲಿ ಕಪ್ರ ಮಿಂಚಿದೆ. 'ಭಾರತ ಭೂಶಿರ' ಹೆಡ್ಲೈನ್ ಸೂಪರ್. ಆದರೆ ಕ್ರಿಕೆಟ್ ವರದಿಗಳಲ್ಲಿ ಹಲವು ತಪ್ಪುಗಳಿದ್ದವು. ಇದು "ತಪ್ಪಾಯ್ತು ತಿದ್ಕೊತೀವಿ"ಯಲ್ಲೂ ಕಾಣಿಸಿಕೊಂಡಿಲ್ಲ. ಇದನ್ನು ಸರಿಪಡಿಸಿಕೊಂಡರೆ ಉಳಿದದ್ದೆಲ್ಲ ಓಕೆ.

ಹೊಸದಿಗಂತವನ್ನು ನಿಜಕ್ಕೂ ಮೆಚ್ಚಬೇಕು. ಆದರೆ ಪತ್ರಿಕೆಗೆ ಓದುಗರ ಕೊರತೆಯಿದೆ. ಸಂಘದ ಪತ್ರಿಕೆ ಎಂಬ ಇಮೇಜ್ ನಿಂದಾಗಿ ಹೀಗಾಗುತ್ತಿದೆ. ಆದರೆ ಇತ್ತೀಚಿಗೆ ಪತ್ರಿಕೆ ಅಂದವಾಗಿ ಮೂಡಿಬರುತ್ತಿದೆ. ಕ್ರಿಕೆಟ್ ಕವರೇಜ್, ವಿನ್ಯಾಸ ಕೂಡ ಉತ್ತಮವಾಗಿತ್ತು. ಆದರೆ ಫೈನಲ್ ದಿನ ಇಂಗ್ಲೀಷ್ ಹೆಡ್ಲೈನ್ ಹಾಕಿ ಎಡವಟ್ಟು ಮಾಡಿತು. ಕನ್ನಡಿಗರು ತಲೆತಗ್ಗಿಸುವಂತೆ ಮಾಡಿತು. ಅಡ್ಡಡ್ಡವಾಗಿ ಸುದ್ದಿ ಪ್ರಕಟಿಸಿದ್ದು ಓಕೆ.

ವಿಶ್ವಕಪ್ ಉದ್ದಕ್ಕೂ ವಿಫಲವಾದ ಪತ್ರಿಕೆಗಳೆಂದರೆ ಪ್ರಜಾವಾಣಿ ಮತ್ತು ವಿಕ. ಪ್ರಜಾವಾಣಿ ಪತ್ರಿಕೆ ಮೊದಲಿನಿಂದಲೂ ಕ್ರೀಡೆ ವರದಿಗೆ ಫೇಮಸ್. ಆದರೆ ಈ ಬಾರಿಯ ವಿಶ್ವಕಪ್ ನಲ್ಲಿ ಇದು ಸುಳ್ಳಾಗಿದೆ. ಇಬ್ಬರು ವರದಿಗಾರರನ್ನು ಮುಂಬಯಿಗೆ ಕಳುಹಿಸಿ, ಭಾರತ ವಿಶ್ವಕಪ್ ಗೆದ್ದಿದ್ದನ್ನು ಸಾಮಾನ್ಯ ಸುದ್ದಿಯಂತೆ ಪ್ರಕಟಿಸಿತು. ವಿಶೇಷ ಮುಖಪುಟ ವಿನ್ಯಾಸ ಕೂಡ ಇರಲಿಲ್ಲ. ಸಾಕಷ್ಟು ಇತರೆ ಸುದ್ದಿಗಳನ್ನು ಮುಖಪುಟದಲ್ಲಿ ಪ್ರಕಟಿಸಿತ್ತು. ಪತ್ರಿಕೆಯಲ್ಲಿ ಕೆಲಸ ಮಾಡುವವರು, ಮಾಡಿಸುವವರು ಜಡ್ಡು ಗಟ್ಟಿದರೆ ಹೀಗೆ ಆಗೋದು. ಇಷ್ಟೇ ಮಾಡುವುದಾದರೆ ಇಬ್ಬರನ್ನು ಮುಂಬಯಿಗೆ ಕಳುಹಿಸುವ ಅಗತ್ಯ ಇರಲ್ಲಿಲ್ಲ.

ವಿ.ಭಟ್ಟರು ಬಿಟ್ಟಮೇಲೆ ವಿಕಕ್ಕೆ ಗರ ಬಡಿದಂತಾಗಿದೆ. ವಿ.ಭಟ್ಟರು ವಿಕ ಬಿಟ್ಟು ೪ ತಿಂಗಳಾಯಿತು. ಈ ಅವಧಿಯಲ್ಲಿ ಒಂದು ಹೊಸ ಪ್ರಯೋಗವನ್ನು ವಿಕ ಮಾಡಿಲ್ಲ. ಅದು ಹೊಸ ಸಂಪಾದಕರ ಸಾಮರ್ಥ್ಯವನ್ನು ತೋರಿಸುತ್ತದೆ! ವಿಶ್ವಕಪ್ ಅವಧಿಯಲ್ಲೂ ಅವರ ಹಾಗು ವಿಕ ಸಿಬ್ಬಂದಿ ಸಾಮರ್ಥ್ಯ ಜಗಜ್ಜಾಹೀರಾಯಿತು. ಮುಖಪುಟಗಳಂತೂ ತುಂಬಾ ಸಪ್ಪೆಯಾಗಿದ್ದವು.

ಇದು ನಮ್ಮ ಅಭಿಪ್ರಾಯ. ನಿಮ್ಮ ಅಭಿಪ್ರಾಯ ಏನು?

4 comments:

Anonymous said...

ondu vicharakkagi idee patrikennu mesalidvu hosa sampradayakke nandi hadiddu janavahini.adu hunasavadi rajan avara parikalpne.

Anonymous said...

ಗಮನಕ್ಕೆ,... ಹೊಸದಿಗಂತ ಕೊಟ್ಟಿದ್ದು ಫೋಟೋ ಮಾತ್ರ.. ಅಲ್ಲಿ ಯಾವುದೇ headline ಇರಲಿಲ್ಲ. ಫೋಟೋ ಅಲ್ಲಿ ಇದ್ದ ಚಾಂಪಿಯನ್ಸ್ ಎನ್ನುವ ಬರಹವೇ ಅಲ್ಲಿತ್ತು ಎಂದು ನನಗನಿಸಿತು...

Anonymous said...

ಈ ವಿಚಾರದಲ್ಲಿ ನಿಮ್ಮ ಗ್ರಹಿಕೆ ತಪ್ಪು. ಆ ದಿನ ಹೊಸದಿಗಂತ ಯಾವುದೇ ತಲೆಬರಹ ನೀಡಲಿಲ್ಲ.. ಚಾಂಪಿಯನ್ಸ್ ಅಂತಾ ಕಾಣೋದು ಫೋಟೋದಲ್ಲಿದ್ದ ಬರಹ.. (ಮಾಧ್ಯಮಗಳೆದುರು ಆಟಗಾರರು ಒಂದು ಬೋರ್ಡ್ ಹಿಡಿದುಕೊಂಡಿದ್ದರು.)

Anonymous said...

vijaya karnatakada IPL kreeda varadiyalli iro tappellaa opkobekaadre 8 puTagala tappu-oppu puravani koDbekaagutte ansutte